Nithya Bhat
Nithya Bhat
August 12, 2016
freedom race rally flyer final - 351 272
Firefox freedom race 2016
August 17, 2016

Venu Vinod

Venu Vinod

Image of Venu Vinod

ಸೈಕಲ್! ಈ ಮೂರಕ್ಷದ ವಾಹನ ಸರಳ, ಯಾರಿಗೂ ಕಿರಿಕಿರಿ ಎನಿಸದ, ಹೊಗೆಯುಗುಳದ, ಕಾಲಿನ ಮಾಂಸಪೇಶಿಗಳ, ಸ್ನಾಯುಗಳ ಬಲವನ್ನು ಬಯಸುವ ಸೈಕಲ್ ನನಗೆ ಮಾತ್ರವಲ್ಲ, ಬಹುತೇಕ ಎಲ್ಲರಿಗೂ ಚಿಕ್ಕಂದಿನಲ್ಲಿ ಪರಮಪ್ರಿಯ. ಅದರಲ್ಲೂ ಹುಡುಗರಿಗೆ ಮೊದಲ ಲವ್.

ನಾನು ಚಿಕ್ಕಂದಿನಲ್ಲಿ ನೋಡಿದ ಸೈಕಲ್ ಗಳೆಲ್ಲಾ ಬಹಳ ಸರಳ. ಎರಡು ಟೈರು, ಅದನ್ನು ಜೋಡಿಸುವ ಕಬ್ಬಿಣದ ತ್ರಿಭುಜ ಪಟ್ಟಿ. ಚೈನ್, ಪೆಡಲ್, ಅದನ್ನು ಹಿಡಿದಿರಿಸುವ ಹಲ್ಲಿರುವ ಚಕ್ರ, ಅಂಥದ್ದೇ ಇನ್ನೊಂದು ಹಿಂದಿನ ಚಕ್ರ, ಒಂದು ಮರದ ತುಂಡಿನಂತೆಯೇ ಭಾಸವಾಗುವ ಸೀಟು ಅಷ್ಟೇ.

ಅಂಚೆಯಣ್ಣನಿಂದು ಹಿಡಿದು ಮಾಸ್ಟರರ ವರೆಗೆ, ಪುರೋಹಿತರಿಂದ ಹಿಡಿದು ಮರಕಡಿಯಲು ಬರುವ ಅಬ್ಬುಬ್ಯಾರಿಯ ವರೆಗೂ ಎಲ್ಲರಿಗೂ ಸಮಾನತೆ ಒದಗಿಸಿದ್ದು ಸೈಕಲ್.

ನನಗೂ ಸೈಕಲ್ ಮೇಲೆ ಪ್ರೀತಿ ಹುಟ್ಟಿದ್ದು ನಾನು ಎಂಟನೇ ತರಗತಿಯಲ್ಲಿರುವಾಗ. ಪಿಯರ್ ಅಟ್ರಾಕ್ಷನ್ ಅಥವಾ ಓರಗೆಯ ಮಕ್ಕಳಿಂದ ಸಹಜವಾಗಿ ನನಗೂ ಸೈಕಲ್ ಕಲಿಯುವ ಆಸೆ ಹುಟ್ಟಿತ್ತು. ಆಗ ಶಾಲೆ ಬಳಿಯ ಮಾರ್ಸೆಲ್ ಸೋಜರ ಅಂಗಡಿಯಲ್ಲಿ ಹೊಸದಾಗಿ ಬಂದ ಹೀರೋ ಜೆಟ್ ಸೈಕಲ್ ಗಳು ಇತರ ಸೈಕಲ್ ನಂತೆಯೇ ಇದ್ದರೂ ಹೊಸ ಮಾದರಿಯ ವರ್ಣದಲ್ಲಿ ಕಂಗೊಳಿಸುತ್ತಿದ್ದವು. 2 ರೂಪಾಯಿ ಬಾಡಿಗೆ ಕೊಟ್ಟರೆ ಒಂದು ಗಂಟೆ ಸೈಕಲ್ ತುಳಿಯಬಹುದು. ಅಂಥದ್ದರಲ್ಲೇ ಎದ್ದು ಬಿದ್ದು ಸೈಕಲ್ ಕಲಿತಿದ್ದಾಯ್ತು.

ನನಗೂ ಒಂದು ಸೈಕಲ್ ಬೇಕೆಂಬ ಹಂಬಲ ಸಸಿಯಾಗಿ ಹುಟ್ಟಿಕೊಳ್ಳುವಾಗ ಎಸ್ಸೆಸ್ಸೆಲ್ಸಿಯಲ್ಲಿದ್ದೆ. ಈಗಲಾದರೆ ಮಕ್ಕಳು ನಡೆಯುವ ಮೊದಲೇ ಒಂದು ತ್ರಿಚಕ್ರ ಸೈಕಲ್, ಅದು ಹಳತಾಗುವ ಮೊದಲೇ ಚಿಕ್ಕ ಗಾಲಿ ಸಹಾಯ ಇರುವ ಸೈಕಲ್ ಬಂದಿರುತ್ತಿದ್ದವು. ನಾನು ಚಿಕ್ಕವನಿದ್ದಾಗ ಆಸೆಗಳನ್ನು ಈಡೇರಿಸುವುದು ಮನೆಯವರಿಗೂ ಕಷ್ಟವೇ. ಆದರೂ ನನ್ನೆಲ್ಲ ಆಕಾಂಕ್ಷೆಗಳಿಗೆ ಬೆಳಕಿಂಡಿಯಾಗಿದ್ದ ನನ್ನ ಚಿಕ್ಕಮ್ಮ ಎಸ್ಸೆಸ್ಸೆಲ್ಸಿಯಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ಗಂಟಲಿನಲ್ಲಿಳಿಯದ ಕಡುಬಾದ ಗಣಿತದಲ್ಲಿ 70ಕ್ಕಿಂತ ಹೆಚ್ಚು ಗಳಿಸಿದರೆ ಸೈಕಲ್ ಕೊಡಿಸುವುದಾಗಿ ಆಶ್ವಾಸನೆಯಿತ್ತರು. ಆದರೆ ಅದರ ಕನಸಿನಲ್ಲಿ ಮುಳುಗಿಯೋ ಏನೋ ನನಗೆ ಪ್ರಥಮ ದರ್ಜೆ ಗಳಿಸಲಷ್ಟೇ ಸಾಧ್ಯವಾಯಿತು. ಗಣಿತದಲ್ಲಂತೂ ಜಸ್ಟ್ ಪಾಸು!
ಹಾಗಾಗಿ ಸೈಕಲ್ ಗಗನ ಕುಸುಮವಾಗಿಯೇ ಉಳಿಯಿತು.

*18 ವರ್ಷ ಬಳಿಕ
ಅಲ್ಲಿಂದ ಕಾಲೇಜು ಪ್ರವೇಶ, ಓದಿನ ಅರಮನೆ ಪ್ರವೇಶಿಸಿದ ಬಳಿಕ ಸೈಕಲ್ ನಂತಹ ‘ಕ್ಷುಲ್ಲಕ’ ವಿಚಾರಗಳಿಗೆಲ್ಲ ಎಡೆಯಿಲ್ಲ! ಹಾಗಾಗಿ ಅದು ಮರೆತೇ ಹೋಯ್ತು. ಉದ್ಯೋಗ ಸಿಕ್ಕ ಬಳಿಕ ಬೈಕ್ ಕೊಳ್ಳುವ ಹಂಬಲ. HERO SPLENDOR ಬಂತು, ಅದು ಹೋಗಿ SUZUKI HEAT ಬಂತು, ನಂತರ SUZUKI GS 150R ಬಂತು. ಇವೆಲ್ಲ ಅನುಭವದ ಬಳಿಕ ದಿಢೀರ್ ಆಗಿ ಹುಟ್ಟಿಕೊಂಡ ಯೋಚನೆ ಸೈಕಲ್ ನದ್ದು.

ಸೈಕಲ್ ಮಹತ್ವವನ್ನು ಭಾರತೀಯರಿಗಿಂತ ಚೆನ್ನಾಗಿ ವಿದೇಶೀಯರು, ಅದರಲ್ಲೂ ಜರ್ಮನ್, ಫ್ರಾನ್ಸ್, ಅಮೆರಿಕಾ, ಬ್ರಿಟನ್ ದೇಶದವರು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಹಾಗಾಗಿ ಆ ಭಾಗದಿಂದ ಜೈಂಟ್, ಸ್ಕಾಟ್, ಫುಜಿ, ಮೆರಿಡಾ, ಶ್ವಿನ್, ಕೆನಂಡೇಲ್ ಮುಂತಾದ ಕಂಪನಿಯ ಸರಳ ಸುಂದರ ಸೈಕಲ್ ಗಳನ್ನು ಭಾರತಕ್ಕೂ ಕಳುಹಿಸಿ ಪ್ರಚುರ ಪಡಿಸಿದ್ದಾರೆ. ಭಾರತದ ಕಂಪನಿಗಳಾದ ಹೀರೋ, ಬಿಎಸ್ಎ, ಹರ್ಕ್ಯುಲಸ್ ಈ ನಿಟ್ಟಿನಲ್ಲಿ ಹಿಂದುಳಿದಿವೆ ಎಂದೇ ಹೇಳಬೇಕು. ಇಲ್ಲಿ ಹಳ್ಳಿಗೆ ಬೇಕಾದಂತಹ ರಫ್ ಎಂಡ್ ಟಫ್ ಸೈಕಲ್ ಅಭಿವೃದ್ಧಿ ಪಡಿಸಿದರೂ ದೊಡ್ಡವರಿಗೆ ಬೇಕಾದ ಫ್ರೇಮ್ ಸೈಜಿನ ಹಗುರವಾದ, ವಿವಿಧ ಆಯ್ಕೆಗಳನ್ನು ಹೊಂದಿದ ಬೈಸಿಕಲ್ಲುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಿಂಜರಿಯುತ್ತಿವೆ. ಹಾಗಾಗಿ ಸೈಕಲ್ ನಗರದವರ ಮನ ಗೆಲ್ಲುತ್ತಿಲ್ಲ.
ಅತ್ರಿಬುಕ್ ಸೆಂಟರ್ ಮಾಜಿ ಮಾಲೀಕ ಅಶೋಕವರ್ಧನರ ಸೈಕಲ್ ಚಳವಳಿಯೂ ನನಗೊಂದು ಆಕರ್ಷಣೆ. ಅವರು ಜಂಟಿ ಸೈಕಲಲ್ಲಿ ಪತ್ನಿ ದೇವಕಿಯವರ ಜತೆ ನಗರ ಸಂಚಾರ ಮಾಡುವುದನ್ನು ನೋಡಿದೆ. ಅಲ್ಲಿಂದ ಬಾಲ್ಯಕಾಲದ ನನ್ನ ಸೈಕಲ್ ಸವಾರಿಯ ಆಸೆ ಮತ್ತೆ ಪುಟಿದೆದ್ದಿತು. ಮತ್ತೆ ಇನ್ಫೋಸಿಸ್ ಉದ್ಯೋಗಿ ಚಾರಣಿಗ ಗೆಳೆಯ ಸಂದೀಪ್ ಕೂಡಾ ತಮ್ಮ ಸೈಕಲ್ ಸಾಹಸ ನನ್ನೊಂದಿಗೆ ಒಮ್ಮೆ ಹೇಳಿಕೊಂಡರು. ಮಂಗಳೂರಿನಂತಹ ಏರು ತಗ್ಗು ಹೆಚ್ಚಿರುವ ಕಡೆಗೆ ಗೇರ್ ಸೈಕಲ್ ಹೇಗೆ ಅನಿವಾರ್ಯ ಎನ್ನುವುದನ್ನು ವಿವರಿಸಿದ್ದರು.

ಆ ಬಳಿಕ ಅಶೋಕವರ್ಧನರು ಬೆಂಗಳೂರಿಗೆ ಹೋಗಿ ಮೆರಿಡಾ ಕಂಪನಿಯ ಮ್ಯಾಟ್ಸ್ ಎನ್ನುವ ಎಂಟಿಬಿ ಖರೀದಿಸಿ, ಸವಾರಿ ಮಾಡಿಕೊಂಡೇ ಬಂದುಬಿಟ್ಟರು. ಅದು ನನಗೆ ಮತ್ತಷ್ಟು ಉತ್ಸಾಹ ಕೊಟ್ಟಿತ್ತು. ಸರಿ ಮನಸ್ಸಿನಲ್ಲಿ ಸೈಕಲ್ ಖರೀದಿಸುವುದನ್ನು ಫೈನಲ್ ಮಾಡಿಯೇ ಬಿಟ್ಟೆ. ವಯಸ್ಸು 30 ದಾಟಿದ ಬಳಿಕ ಆರೋಗ್ಯದತ್ತ ಚಿಂತೆ ಮಾಡಿಸುವಂತೆ ಮಾಡಿದ ದೇಹ, ಇತರ ವ್ಯಾಯಾಮಗಳಿಗಿಂತ ಇದೊಂದು ಎಂಟರ್ಟೈನಿಂಗ್ ಕೂಡಾ.

ಸೈಕಲ್ ಖರೀದಿಗೆ ಎಂದು ನಾನು ಮೊದಲು ಇರಿಸಿದ್ದು 15 ಸಾವಿರ ರೂ. ಬೆಂಗಳೂರಿನಲ್ಲಿರುವ ಗೆಳೆಯ ದೀಪಕ್, ಸೈಕಲಲ್ಲಿ ಭಾರತ ಸುತ್ತುವ ಕೊಲ್ಕತ್ತದ ಗೆಳೆಯ ಮಿಥುನ್ ದಾಸ್ ಇವರಿಗೆಲ್ಲಾ ಮಾತನಾಡಿದಾಗ ನನ್ನ ಬಜೆಟ್ ಒಂದಷ್ಟು ವಿಸ್ತರಿಸಿದರೆ ಸ್ವಲ್ವ ಹೆಚ್ಚು ಬಾಳಿಕೆ ಬರುವ ಹಗುರ, ಸವಾರಿ ಖುಷಿ ಹೆಚ್ಚಿಸುವ ಸೈಕಲ್ ಸಿಗಬಹುದು ಎಂದರು. ಇಂಟರ್ ನೆಟ್ ನಲ್ಲೂ ಒಂದಷ್ಟು ಪುಟ ತಿರುವಿ ಹಾಕಿದೆ. ನನ್ನ ಆಯ್ಕೆಗೆ ಎಂಟಿಬಿಗಿಂತಲೂ ಹೈಬ್ರಿಡ್ ಒಳ್ಳೆಯದು ಎನ್ನಿಸಿಬಿಟ್ಟಿತು. ಹಾಗೆ ಮೆರಿಡಾ ಎಂಬ ಕಂಪನಿಯ ಕ್ರಾಸ್ ವೇ ಮಾಡೆಲಿನ ಹೈಬ್ರಿಡ್ ಸೈಕಲ್ ಖರೀದಿಸಿಯೇ ಬಿಟ್ಟೆ.

ಕಳೆದ ಒಂದೂವರೆ ವರ್ಷದಿಂದ ಸೈಕ್ಲಿಂಗ್ ನನ್ನ ಜೀವನದ ಅವಿಭಾಜ್ಯ ಅಂಗ. ನನ್ನ ಮನೆಯ ಸುತ್ತುಮುತ್ತಲಿನ ಎಷ್ಟೋ ಭಾಗಗಳನ್ನು ನೋಡಿರಲಿಲ್ಲ, ಅಲ್ಲೆಲ್ಲ ನನ್ನನ್ನು ಸೈಕಲ್ ಹೊತ್ತೊಯ್ದಿದೆ. MRPL ಕಂಪನಿಯ ಸೆರಗಿನಲ್ಲೇ ಇರುವ ಸುಂದರ ಗುಡ್ಡ ಕಾಡು, ಸೂರಿಂಜೆ ಪರಿಸರದಲ್ಲಿ ಇನ್ನೂ ಉಳಿದುಕೊಂಡಿರುವ ಗದ್ದೆಗಳ ಸೌಂದರ್ಯ ಸವಿದಿದ್ದರೆ ಅದಕ್ಕೆ ಕಾರಣ ಸೈಕಲ್. ನಗರದಿಂದ ಒಳಗೆ… ಒಳಗೊಳಗೆ ನಮ್ಮನ್ನು ಕರೆದೊಯ್ಯುವ ಯಾವುದೋ ಅಪರಿಚಿತ ರಸ್ತೆಯಲ್ಲಿ ಹೋದರೆ ಎದುರು ಕಾಣುವ ಹಳ್ಳಿಯೊಂದು ನನ್ನನ್ನು ಮಂತ್ರಮುಗ್ದಗೊಳಿಸಿದ್ದಿದೆ. ಸೈಕಲ್ನಲ್ಲಿ ಬೆವರು ಬಸಿದರೂ ಖುಷಿ ಇದೆ.

X