ಗೆಳೆಯ ಗಣೇಶರ ಪ್ರೀತಿಪೂರ್ವಕ ಒತ್ತಾಯಕ್ಕೆ ಮಣಿದು, MbC ಯು ಆಯೋಜಿಸಿದ್ದ 200 ಕಿ.ಮೀ. (04.09.2016 ಬೆಳಿಗ್ಗೆ 4ರಿಂದ ಸಂಜೆಯ ತನಕ) ಸೈಕಲ್ ಸವಾರಿಯ ನನ್ನ ಅನಿಸಿಕೆಗಳನ್ನು ಬರೆಯುತ್ತಿದ್ದೇನೆ.
ನಾನು ಸೈಕಲ್ ಸವಾರಿಯನ್ನು ಕೊನೆಯ ಬಾರಿಗೆ ಮಾಡಿದ್ದು 1992-93ರಲ್ಲಿ. ಅದೂ ಕೂಡಾ ಹವ್ಯಾಸವಾಗಿ. ಊರಿನ ಗೆಳೆಯರೊಂದಿಗೆ ಸೇರಿ ಪಿ.ಯು.ಸಿ ಮೊದಲ ವರ್ಷ ರಜೆಯಲ್ಲಿ 10 ಜನ ಸೈಕಲುಗಳಲ್ಲಿ ಪುತ್ತೂರಿನಿಂದ ಮೈಸೂರಿಗೆ ಹೋಗಿ ಬಂದದ್ದು. ಅದು 7 ದಿನಗಳ ಸವಾರಿಯಾಗಿತ್ತು. ನಮ್ಮೆಲ್ಲರದ್ದೂ ಸಾಮಾನ್ಯವಾದ ಗಿಯರುಗಳಿಲ್ಲದ ಸೈಕಲುಗಳಾಗಿದ್ದವು. ಸಂಪಾಜೆ ಘಾಟಿಯನ್ನು ಸೈಕಲ್ ದೂಡಿಕೊಂಡೇ ಹತ್ತಿದ್ದು. ನಾವು ಮಡಿಕೇರಿ, ಅಬ್ಬಿಫಾಲ್ಸ್, ಭಾಗಮಂಡಲ, ತಲಕಾವೇರಿ ಮತ್ತು ನಾಗರಹೊಳೆಗೆ ಹೋಗಿ ಮೈಸೂರು ತಲುಪಿದ್ದು. ಹಿಂತಿರುಗಿ ಬರುವಾಗ ಶ್ರೀರಂಗಪಟ್ಟಣ ಮತ್ತು ಶ್ರವಣಬೆಳಗೊಳಕ್ಕೆ ಹೋಗಿ, ಶಿರಾಡಿ ಘಾಟಿಯಲ್ಲಿ ಇಳಿದು ಪುತ್ತೂರಿಗೆ ತಲುಪಿದ್ದು. 10 ಜನರಲ್ಲಿ ನಾನೊಬ್ಬ ಬಿಟ್ಟು ಉಳಿದ 9 ಜನ ಗೆಳೆಯರೂ ನಿತ್ಯ ಸೈಕಲಿನಲ್ಲಿ ಓಡಾಡುವವರೇ.
23 ವರ್ಷಗಳ ಬಳಿಕ, 07.07.2016 ಕ್ಕೆ ನಾನು ಪುನಃ ಸೈಕಲ್ ಸವಾರಿ ಆರಂಭಿಸಿದೆ. ಈಗಿನದ್ದು ಹೈಬ್ರಿಡ್ – ಗಿಯರ್ ಸಹಿತ ಸೈಕಲ್. ಸೈಕಲ್ ತೆಗೊಂಡ ನಾಲ್ಕನೇ ದಿನ MBC ಟೀಮಿನೊಂದಿಗೆ ಕುದುರೆಮುಖ ಘಾಟಿ ಹತ್ತಿದ್ದು. ಅದೂ ಸೈಕಲಿನ ಸೀಟಿನಲ್ಲಿ ಕುಳಿತೇ ಪೆಡಲ್ ಮಾಡಿಕೊಂಡು…. ನನಗೇ ಆಶ್ಚರ್ಯ
ಅದಾದ ಬಳಿಕ ದಿನವೂ ನಾನು ಬೆಳಗಿನ ಸಮಯ ಹವ್ಯಾಸವಾಗಿ ಸೈಕಲ್ ಸವಾರಿ ಮಾಡುತ್ತಿದ್ದೇನೆ. ಕಲ್ಲಡ್ಕಕ್ಕೆ ಸೈಕಲಿನಲ್ಲಿ ಹೋಗಿ ಅಲ್ಲಿನ ಖ್ಯಾತ ಕೆ-ಟೀ ಕುಡಿದು ಬಂದೂ ಆಯಿತು. ಮತ್ತೆ ಟೀಮಿನೊಂದಿಗೆ ಉಡುಪಿಗೆ ಹೋಗಿ, ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನಪಡೆದು ಅಷ್ಟಮಠಗಳಿರುವ ರಥಬೀದಿಯಲ್ಲಿ ಸೈಕಲಿನಲ್ಲೇ ಒಂದು ಸುತ್ತುಹೊಡೆದು ಹಿಂತಿರುಗಿ ಬಂದು 100 ಕಿ.ಮೀ. ದೂರದ ಸವಾರಿ ಮಾಡಿಯೂ ಆಯ್ತು.
ಆಗುಂಬೆ-ಕುಂದಾದ್ರಿ ಘಾಟಿಗಳನ್ನೂ ನನ್ನ MbC ಟೀಮಿನ ಗೆಳೆಯರೊಂದಿಗೆ ಈ ಹೈಬ್ರಿಡ್ ಸೈಕಲಿನಲ್ಲಿ ಕುಳಿತೇ ಹೋಗಿ ಬಂದಾಗ ಏನೋ ಸಾಧಿಸಿದ ಸಂತೋಷವಾಯಿತು.
ನಾನು ಸೈಕಲ್ ಖರೀದಿಸಿದ ಎರಡು ತಿಂಗಳೊಳಗೆ 200 ಕಿ.ಮೀ.ದೂರದ ಸೈಕಲ್ ಸವಾರಿಯನ್ನು ನನ್ನ MbC ಟೀಮಿನ 8 ಜನ ಗೆಳೆಯರೊಂದಿಗೆ ಒಂದೇ ದಿನದಲ್ಲಿ ಮಾಡಿ ಬಂದದ್ದು ಮಾತ್ರ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವ. ಅದರಲ್ಲೂ ನಮ್ಮ ಜೊತೆಗೆ ಬಂದು, ಹಿಂದಿನ ಕಾಲದ ಅದೇ ಸಾಮಾನ್ಯ ಸೈಕಲಿನಲ್ಲಿ 200 ಕಿ.ಮೀ. ಪ್ರಯಾಣವನ್ನು(ಎಲ್ಲಾ ಏರುಮಾರ್ಗಗಳನ್ನೂ ಪೆಡಲ್ ಮಾಡಿಯೇ) ಪೂರ್ತಿ ಗೊಳಿಸಿದ ಶ್ರೀಕಾಂತರಾಜರ ಉತ್ಸಾಹವನ್ನು ನೋಡಿ, ನಾನು ಆಯಾಸಗೊಂಡಿದ್ದೂ ಮರೆತುಹೋಯಿತು.
ಗಣೇಶರೂ ಸೇರಿ ನನ್ನ ಜೊತೆಗಾರ ಗೆಳೆಯರ ಪ್ರೋತ್ಸಾಹ, ಸಲಹೆ, ಒಡನಾಟ ಮತ್ತು ಅವರಿಂದ ನಾನು ಪಡೆದ ಸ್ಪೂರ್ತಿ – ಇದರಿಂದ ಮಾತ್ರ ನಾನು 200ಕಿ.ಮೀ. ದೂರದ ಸೈಕಲ್ ಸವಾರಿ ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗಿದ್ದು. ಗೆಳೆಯ ಗೌರವ್ ಹೇಳಿದ್ದು ಸರಿ – ಸೈಕ್ಲಿಂಗ್ ಒಂದು MIND SET.
ಇದನ್ನು ಓದಿ ಯಾರಿಗಾದರೂ ತಾವೂ ಸೈಕ್ಲಿಂಗ್ ಮಾಡಬೇಕೆಂದು ಅನ್ನಿಸಿದರೆ ನಾನು ಬರೆದದ್ದು ಸಾರ್ಥಕ. ಬರೆದ ಉದ್ದೇಶವೂ ಅದೇ.
ಹರಿಪ್ರಸಾದ್ ಶೇವಿರೆ.
ಮಂಗಳೂರು.