“ಕೆಲಸಕ್ಕೆಂದು ಮಂಗಳೂರಿಗೆ ಬಂದು ಮೂರು ವರ್ಷವಾಯಿತು. ಮಂಗಳೂರಿನಲ್ಲಿ ನನ್ನ ಸೈಕಲ್ ಸವಾರಿ ಶುರುವಾಗಿ ಎಂಟು ತಿಂಗಳು ಪೂರ್ತಿಯಾಯಿತಷ್ಟೆ ಜೂನ್ ತಿಂಗಳಿಗೆ. ವೃತ್ತಿಯಲ್ಲಿ ‘ಪರಿಸರ ವಿಜ್ಞಾನ ಅಭಿಯಂತರ’ ಉರುಫ್ ಎನ್ವಿರಾನ್ಮೆಂಟಲ್ ಎಂಜಿನಿಯರು. ಕಾಲೇಜಿಗೆ ನಾಲ್ಕು ವರ್ಷ ಸೈಕಲ್ ನಲ್ಲೇ ಹೋಗಿದ್ದವನು. ಆದರೂ ‘ಕುಡ್ಲ’ದಲ್ಲಿ ಸೈಕಲ್ ಕಡೆ ತಲೆ ಹಾಕಲಿಲ್ಲ ಎರಡು ವರ್ಷ. ಅಶೋಕವರ್ಧನರ ಸೈಕಲ್ ಸವಾರಿಯ ಕಥೆಗಳು ನನಗೆ ಪುನಃ ಸೈಕಲ್ ತುಳಿಯಲು ಸ್ಫೂರ್ತಿ ನೀಡಿದವು.
ಸೈಕಲ್ ಸವಾರಿಯಿಂದಾಗಿ ಪರಿಸರವನ್ನು ನಾನು ನೋಡುವ ಬಗೆಯೇ ಬದಲಾಗಿದೆ. ಪರಿಸರವನ್ನು ಹೆಚ್ಚು ಪ್ರೀತಿಸತೊಡಗಿದ್ದೇನೆ. ಮುಂಜಾವಿನ ತಣ್ಣನೆಯ ಗಾಳಿ, ಪೂರ್ತಿ ದಿನದ ಕೆಲಸಕ್ಕೆ ಉಲ್ಲಾಸ ನೀಡುತ್ತಿದೆ. ನೂರು ಇನ್ನೂರು ಕಿಲೋಮೀಟರ್ ಗಳ ಸವಾರಿಗಳು ನನ್ನ ಸಾಮರ್ಥ್ಯ ದ ಬಗ್ಗೆ ನಂಬಿಕೆ ಹೆಚ್ಚಿಸಿದೆ. ಬೈಸಿಕಲ್ ಸಂಘಗಳ ಮೂಲಕ ಸ್ನೇಹಿತರ ಸಂಖ್ಯೆ ಬೆಳೆಸಿದ್ದೇನೆ. ಎಲ್ಲದಿಕ್ಕಿಂತ ಹೆಚ್ಚಾಗಿ ಹೊಟ್ಟೆಯ ಬೊಜ್ಜು ಕರಗುತ್ತಿದೆ!”